top of page
Search

ಮಗುವಿನ ಕಿವಿ ಚುಚ್ಚುವ ಶಾಸ್ತ್ರ ಮಾಡುವಾಗ ಈ ಸಂಗತಿಗಳನ್ನು ನೆನಪಿಟ್ಟುಕೊಳ್ಳಿ..!

ಮಗು ತನ್ನ ಜನನದಿಂದ ಮರಣದ ತನಕವೂ ಹಂತ ಹಂತವಾದ ವಿಕಸನವನ್ನು ಪಡೆದುಕೊಳ್ಳುತ್ತದೆ. ದೇಹದ ಬೆಳವಣಿಗೆ ಮತ್ತು ಬುದ್ಧಿಯ ಬೆಳವಣಿಗೆಯಾದಂತೆ ಜೀವನದ ರೀತಿ-ನೀತಿಗಳನ್ನು ಅರಿಯುತ್ತಾ ಸಾಗುತ್ತದೆ. ವ್ಯಕ್ತಿ ತನ್ನ ಬಾಲ್ಯದಿಂದ ಯೌವ್ವನದ ತನಕ ಹೇಗೆ ಸಂಸ್ಕಾರವನ್ನು ಪಡೆದುಕೊಂಡಿರುತ್ತಾನೋ ಹಾಗೆ ಅವನ ಮುಂದಿನ ಜೀವನವು ನಿರ್ಧಾರವಾಗುತ್ತದೆ. ಜೀವನದ ಏಳು-ಬೀಳುಗಳು ಸಹ ಸಂಸ್ಕಾರವನ್ನು ಆಧರಿಸಿರುತ್ತದೆ ಎನ್ನಲಾಗುವುದು.


ಹಿಂದೂ ಧರ್ಮದ ಪ್ರಕಾರ ಪ್ರತಿಯೊಬ್ಬರು ಹುಟ್ಟಿನಿಂದ-ಸಾಯುವ ತನಕ ಒಂದೊಂದೇ ಹಂತವನ್ನು ದಾಟಿ ಹೋಗಬೇಕು. ಪ್ರತಿ ಹಂತದಲ್ಲಿ ಪಡೆದುಕೊಳ್ಳುವ ಸಂಸ್ಕಾರಗಳು ಆ ವ್ಯಕ್ತಿಯ ಕರ್ಮಗಳನ್ನು ನಿರ್ಧರಿಸುತ್ತವೆ. ಹಿಂದೂ ಧರ್ಮದ ಆಚರಣೆಯ ಪ್ರಕಾರ ವ್ಯಕ್ತಿಗೆ ಹದಿನಾರು ಸಂಸ್ಕಾರಗಳನ್ನು ನೀಡಲಾಗುವುದು. ನಿಜ, ತಾಯಿಯ ಗರ್ಭದಲ್ಲಿ ಇರುವಾಗಿನಿಂದಲೇ ಮಗುವಿಗೆ ಸಂಸ್ಕಾರ ಕ್ರಮವನ್ನು ನೀಡಲು ಪ್ರಾರಂಭವಾಗುತ್ತದೆ. ಅಂತಹ ಒಂದು ಪವಿತ್ರ ಹಾಗೂ ಮಹತ್ವದ ಸಂಸ್ಕಾರಗಳಲ್ಲಿ ಕರ್ಣವೇಧನ ಸಂಸ್ಕಾರವೂ ಒಂದು. ಮಗುವಿನ ಆರೋಗ್ಯ ಹಾಗೂ ಜೀವನ ಕ್ರಮವನ್ನು ನಿರ್ಧರಿಸಲು ಸಹಾಯ ಮಾಡುವ ಒಂದು ಆರಂಭಿಕ ಸಂಸ್ಕಾರ ಕ್ರಮ ಎಂದು ಹೇಳಲಾಗುತ್ತದೆ.

ಕಿವಿ ಚುಚ್ಚುವಿಕೆಯ ಮಹತ್ವ


ಕಿವಿ ಚುಚ್ಚುವ ಸಂಸ್ಕಾರವನ್ನು ಕೈಗೊಳ್ಳುವಾಗ ಸಾಮಾನ್ಯವಾಗಿ ಶುಭ ಮುಹೂರ್ತವನ್ನು ನೋಡುತ್ತಾರೆ. ನಂತರ ಆ ಸೂಕ್ತ ಸಮಯದಲ್ಲಿ ಕಿವಿ ಚುಚ್ಚುವ ಕಾರ್ಯ ಮಾಡುವರು. ಆಗ ಅದು ಅತ್ಯಂತ ಶುಭಕರವಾಗುವುದು ಎನ್ನುವ ನಂಬಿಕೆಯಿದೆ. ಈ ಪದ್ಧತಿ ಕೇವಲ ಮಗುವಿಗೆ ನೀಡುವ ಸಂಸ್ಕಾರವಲ್ಲ. ವೈಜ್ಞಾನಿಕವಾಗಿಯೂ ಮಹತ್ವವನ್ನು ಪಡೆದುಕೊಂಡಿದೆ. ಕಿವಿ ಮತ್ತು ಮೆದುಳಿನ ಮೂಲಕ ಹಾದುಹೋಗುವ ನರಗಳ ನಡುವೆ ಸರಿಯಾದ ರಕ್ತ ಪರಿಚಲನೆ ಇರುತ್ತದೆ. ಇದು ಆಧುನಿಕ ಆಕ್ಯುಪ್ರಶರ್ ವಿಧಾನಕ್ಕೆ ಅನುಗುಣವಾಗಿ ಪ್ರಬಲವಾದ ಚಿಕಿತ್ಸೆ ಎಂದೂ ಕರೆಯಲಾಗುತ್ತದೆ. ಕಿವಿಗಳ ಮೇಲಿನ ಒತ್ತಡದಿಂದಾಗಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಅದರ ನಂತರ ಚಿನ್ನ ಅಥವಾ ಬೆಳ್ಳಿ ಲೋಹವನ್ನು ಧರಿಸುತ್ತಾರೆ. ಇದು ಧಾರ್ಮಿಕ ನೀತಿಯ ಜೊತೆಗೆ ಸೌಂದರ್ಯವನ್ನು ಹೆಚ್ಚಿಸುವುದು.


ಕಿವಿ ಚುಚ್ಚುವಾಗ ನೆನಪಿಟ್ಟುಕೊಳ್ಳಬೇಕಾದ ಸಂಗತಿಗಳು


  • ಕಿವಿ ಚುಚ್ಚುವಾಗ ಮಗುವಿನ ವಯಸ್ಸು ಮತ್ತು ತಿಂಗಳನ್ನು ಮೊದಲು ಪರಿಶೀಲಿಸಬೇಕು.


  • ಮಗುವಿನ ಕುಂಡಲಿ ಹಾಗೂ ನಕ್ಷತ್ರದ ಅನುಸಾರ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಬೇಕು.


  • ಶುಭ ಕಾರ್ಯವನ್ನು ಮಾಡುವ ಮೊದಲು ಗಣೇಶ ಹಾಗೂ ಶುಭ ದೇವತೆಗಳ ಪೂಜೆಯನ್ನು ಮಾಡಬೇಕು.


  • ನಂತರ ಹುಡುಗ/ಹುಡುಗಿಯ ಕಿವಿಯನ್ನು ಸೂರ್ಯನ ಎದುರು ಚುಚ್ಚಬೇಕು.


  • ಸಂಸ್ಕಾರ ನೀಡುವಾಗ ಪಾಲಕರು ಮಗುವಿನ ಭವಿಷ್ಯ ಉಜ್ವಲವಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಬೇಕು.


  • ಕಿವಿಯನ್ನು ಚುಚ್ಚುವ ಲೋಹವು ಶುದ್ಧ ಹಾಗೂ ಉತ್ತಮ ಲೋಹದಿಂದ ಕೂಡಿರಬೇಕು.


  • ಕರ್ಣವೇದ ಸಂಸ್ಕಾರ ಮಾಡಲು ಸೂಕ್ತ ದೇವತೆಗಳ ಪೂಜೆ ಹಾಗೂ ಸರಿಯಾದ ಸ್ಥಳವನ್ನು ನಿಗದಿಪಡಿಸಿ.


  • ಮಕ್ಕಳ ಆರೋಗ್ಯವು ಉತ್ತಮವಾಗಿರಲು ಹಾಗೂ ಅವರ ಭವಿಷ್ಯದಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆ ಬರದೆ ಇರಲಿ ಎನ್ನುವ ಉದ್ದೇಶಕ್ಕೆ ಕಿವಿ ಚುಚ್ಚುವ ಸಂಸ್ಕಾರವನ್ನು ಕೈಗೊಳ್ಳಲಾಗುವುದು.

 
 
 

Comentários


©2021 by PSJ . Proudly created by VPSS

bottom of page